Powered By Blogger

Thursday, April 2, 2020

ಗದಗ ಜಿಲ್ಲೆಯಲ್ಲಿ ನಾಳೆಯಿಂದ ಮನೆ ಮನೆಗೆ ತರಕಾರಿ




ಕೋವಿಡ್-೧೯ ಸೊಂಕು ಭೀತಿ
ಮುಂಜಾಗ್ರತಾ ಕ್ರಮವಾಗಿ
ಗದಗ ಕೊರೊನಾ(ಕೋವಿಡ್ ೧೯) ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ನಾಳೆಯಿಂದ ಮನೆ ಮನೆಗೆ ತರಕಾರಿ ಮಾರಾಟಕ್ಕೆ ಕ್ರಮ ಜರುಗಿಸಲಾಗುತ್ತಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ ತಿಳಿಸಿದರು.
ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಆವರಣದಲ್ಲಿಂದು ಜರುಗಿದ ತರಕಾರಿ, ಕಿರಾಣಿ ಹಾಗೂ ಹೊಟೇಲ್ ವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರಸಭೆ ವ್ಯಾಪ್ತಿಯ ತರಕಾರಿ ಮಾರುಕಟ್ಟೆಗಳಲ್ಲಿ ಜನಸಾಂದ್ರತೆ ಹೆಚ್ಚಾಗುತ್ತಿದ್ದು ಇದರಿಂದ ವೈರಸ್ ತಗಲುವ ಭೀತಿಯಿದ್ದು ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ನಗರದ ತರಕಾರಿ ಮಾರುಟ್ಟೆಗಳನ್ನು ಬಂದ ಮಾಡಲಾಗುತ್ತಿದೆ ಎಂದು ತಿಳಿಸಿದರು. ನಗರ ಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾಳೆಯಿಂದ ತರಕಾರಿಗಳನ್ನು ವಾರ್ಡವಾರು ತಳ್ಳು ಗಾಡಿಗಳ ಮುಖಾಂತರ ಮನೆ ಮನೆಗೆ ಮಾರಾಟ ಮಾಡಲು ವರ್ತಕರು ಸಹಮತ ವ್ಯಕ್ತ ಪಡಿಸಿದ್ದು ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ಅಗತ್ಯದ ಸಹಕಾರ ನೀಡಲಾಗುವದು. ವಾರ್ಡವಾರು ತರಕಾರಿ ಮಾರಾಟ ಮಾಡುವ ವರ್ತಕರಿಗೆ ಗುರುತಿನ ಚೀಟಿಗಳನ್ನು ನೀಡಲಾಗುವದು ವರ್ತಕರು, ವ್ಯಾಪಾರಸ್ಥರು ಸಾಮಾಜಿ ಅಂತರ ಕಾಯ್ದುಕೊಳ್ಳುವ ಹಾಗೂ ಸ್ಯಾನಿಟೈಸರಗಳನ್ನು ಬಳಸುವಂತೆ ತಿಳಿಸಿದರು. ವಾರ್ಡವಾರು ತರಕಾರಿ ಮಾರಾಟ ಮಾಡುವದರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ನಗರಸಭೆ ವತಿಯಿಂದ ಅಗತ್ಯದ ಕ್ರಮ ಕೈಗೊಳ್ಳಲಾಗುವದು ಎಂದರು. ಸಾರ್ವಜನಿಕರು ತರಕಾರಿ ಖರೀದಿ ಸಂದರ್ಭದಲ್ಲಿ ಮನೆಯಿಂದ ಯಾರಾದರೂ ಒಬ್ಬರೇ ತರಕಾರಿ ಖರೀದಿಗೆ ಆಗಮಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು. ಕಿರಾಣಿ ಅಂಗಡಿಗಳು ಮುಂಜಾನೆ ೭ ಗಂಟೆಯಿಂದ ೧೦ ಗಂಟೆಯವರೆಗೆ ತೆರೆದಿದ್ದು ಅಂಗಡಿಗಳಿಗೆ ಆಗಮಿಸುವ ಸಾರ್ವಜನಿಕರು ಒಬ್ಬೊಬ್ಬರಾಗಿ ಆಗಮಿಸಿ ಅಗತ್ಯದ ಸಾಮಗ್ರಿಗಳನ್ನು ಖರೀದಿ ಮಾಡಲು ಮನವಿ ಮಾಡಿದ ಅವರು ಅಂಗಡಿಗಳಲ್ಲಿ ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ ಬಳಸುವಂತೆ ವರ್ತಕರಿಗೆ ಸೂಚನೆ ನೀಡಿದರು. ನಗರದ ಸಾರ್ವಜನಿಕರು ನಾಳೆಯಿಂದ ತರಕಾರಿಗಾಗಿ ಬೀದಿಗೆ ಇಳಿಯದೆ ಅವಶ್ಯವಿರುವ ಕಿರಾಣಿ ಸಾಮಗ್ರಿಗಳ ಖರೀದಿಗಾಗಿ ಮನೆಯಿಂದ ಒಬ್ಬ ಸದಸ್ಯರು ನಿಗದಿಪಡಿಸಿದ ಸಮಯದಲ್ಲಿ ಬಂದು ಖರೀದಿಸಿ ವೈರಸ್ ಸೋಂಕು ಹರಡದಂತೆ ಈ ಮುಂಜಾಗ್ರತಾ ಕಾರ್ಯದಲ್ಲಿ ಪ್ರತಿಯೊಬ್ಬರು ಸಹಕರಿಸುವಂತೆ ಜಿಲ್ಲಾ ಪೊಲಿಸ ವರಿಷ್ಠಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಸಿ.ಪಿ.ಐ.ಆರ್.ಎಫ್, ದೇಸಾಯಿ, ಗದಗ ಡಿ.ಎಸ್.ಪಿ. ಪ್ರಹ್ಲಾದ, ನಗರದ ತರಕಾರಿ, ಕಿರಾಣಿ ವರ್ತಕರು ಸಭೆಯಲ್ಲಿ ಉಪಸ್ಥಿತರಿದ್ದರು.

No comments:

Post a Comment